ಕ್ವಿಂಟಿಲಿಯನ್

ಪ್ರಸಿದ್ಧ ರೋಮನ್ ಅಲಂಕಾರಶಾಸ್ತ್ರಜ್ಞ. ವಾಗ್ಮಿ ಕಲೆಯನ್ನು ಕುರಿತು ಲ್ಯಾಟಿನ್ ಭಾಷೆಯಲ್ಲಿ ಪ್ರಖ್ಯಾತವಾದ ಗ್ರಂಥವೊಂದನ್ನು ಬರೆದಿದ್ದಾನೆ. ಈತನ ಜನನ ಮರಣಗಳ ಸಂವತ್ಸರಗಳನ್ನು ಖಚಿತವಾಗಿ ಹೇಳಲಾಗದಿದ್ದರೂ ಸುಮಾರು ಕ್ರಿ.ಶ.35ರಿಂದ 100 ಈತನ ಜೀವಿತಕಾಲವೆಂದು ನಿಶ್ಚಿತವಾಗಿದೆ. ಸ್ಪೇನಿನ ಒಂದು ಸಣ್ಣ ಊರಿನಲ್ಲಿ ಹುಟ್ಟಿದನಾದರೂ ಬಾಲ್ಯದಲ್ಲೇ ಈತ ರೋಮ ನಗರಕ್ಕೆ ಬಂದ. ಅಲ್ಲಿ ಇವನ ತಂದೆ ವಾಗ್ಮಿಕಲೆಯ ಬೋಧಕನಾಗಿದ್ದ. ತನ್ನ ತಂದೆಯಿಂದಲ್ಲದೆ ಹಲವು ಉಪಾಧ್ಯಾಯರುಗಳಿಂದ ಇವನಿಗೆ ಅಲ್ಲಿ ವಿದ್ಯಾಭ್ಯಾಸ ದೊರೆಯಿತು. ವಕೀಲ ವೃತ್ತಿಗೆ ಸೇರಿಕೊಂಡನಾದರೂ ಅದರಲ್ಲಿ ಅಷ್ಟೇನೂ ಯಶಸ್ಸು ಗಳಿಸಲಿಲ್ಲ. ಜೊತೆಗೆ ವಾಗ್ಮಿಕಲೆಯನ್ನು ಹೇಳಿಕೊಡುವ ಕೆಲಸವನ್ನೂ ಮಾಡುತ್ತಿದ್ದ. 61ರಲ್ಲಿ ಗಾಲ್ಬ (ಕ್ರಿ.ಪೂ.3-ಕ್ರಿ.ಶ.69) ಎಂಬಾತನ ಆಶ್ರಯ ಸಿಕ್ಕಿದಾಗ ಈತನ ಬಾಳಿನಲ್ಲಿ ದೊಡ್ಡ ಬದಲಾವಣೆ ಉಂಟಾಯಿತು. 61ರಿಂದ 68ರ ವರೆಗೆ ಗಾಲ್ಬನೊಡನೆ ಸ್ಪೇನಿನಲ್ಲಿದ್ದು ಹಿಂದಿರುಗಿದ. ಆ ಗಾಲ್ಬನೇ ಮುಂದೆ ಚಕ್ರವರ್ತಿ ಪದವಿಗೆ ಏರಿದ. 68ರಿಂದ ಸುಮಾರು 88ರವರೆಗೆ, ಎಂದರೆ ಇಪ್ಪತ್ತು ವರ್ಷ, ಕ್ವಿಂಟಿಲಿಯನ್ ಚಕ್ರವರ್ತಿಯಿಂದ ವೇತನ ಪಡೆದು ವಾಗ್ಮಿವಿದ್ಯೆಯ ಪ್ರಾಧ್ಯಾಪಕನಾಗಿ ಹೆಸರುವಾಸಿಯಾದ. ಹಾಗೆ ಸಂಬಳದ ಪ್ರಾಧ್ಯಾಪಕರಲ್ಲಿ ಇವನೇ ಮೊದಲಿಗ; ಕ್ರಮೇಣ ಆಸ್ತಿಪಾಸ್ತಿ ಸಂಪಾದಿಸಿ ಐಶ್ವರ್ಯವಂತನಾದ. ಅಧ್ಯಾಪಕ ವೃತ್ತಿಯಿಂದ ನಿವೃತ್ತವಾಗಿ, 89-91ರ ಅವಧಿಯಲ್ಲಿ ತನ್ನ ಮಹಾಗ್ರಂಥವಾದ ದಿ ಇನ್‍ಸ್ಟಿಟ್ಯೂಷಿಯೊ ಆರೆಟೋರಿಯಾ (ವಾಗ್ಮಿಯಶಿಕ್ಷಣ) ಎಂಬುದನ್ನು ಬರೆದು ಪೂರೈಸಿದ. ಮಗನಾದ ಗೆಟನಿಗೋಸ್ಕರ ಅದನ್ನು ರಚಿಸಿದನೆಂಬ ವದಂತಿಯಿದೆ. ಕ್ವಿಂಟಿಲಿಯನ್ ಮದುವೆಯಾದದ್ದು ಇಳಿವಯಸ್ಸಿನಲ್ಲಿ; ಹೆಂಡತಿ ತನ್ನ 18ನೆಯ ವಯಸ್ಸಿನಲ್ಲಿಯೇ ಮೃತಿಹೊಂದಿದಳು; ಹುಟ್ಟಿದ ಇಬ್ಬರು ಗಂಡುಮಕ್ಕಳೂ ಬೇಗ ಬೇಗ ಸತ್ತರು. ಚಕ್ರವರ್ತಿಯ ಅಪ್ಪಣೆಯಂತೆ ಮತ್ತೆ ಕೆಲವು ವರ್ಷ ರಾಜ್ಯಪುತ್ರರಿಗೆ ಪಾಠ ಹೇಳಬೇಕಾಯಿತು, ಕ್ವಿಂಟಿಲಿಯನ್.

	ಇನ್‍ಸ್ಟಿಟ್ಯೂಷಿಯೊ ಆರೆಟೋರಿಯಾ: ಹನ್ನೆರಡು ಅಧ್ಯಾಯಗಳುಳ್ಳ ಈ ಬೃಹದ್ ಗ್ರಂಥದಲ್ಲಿ ವಾಗ್ಮಿಕಲೆಯ ಸಮಗ್ರ ವಿವೇಚನೆ ಇದೆಯಲ್ಲದೆ ಅಂದಿನ ಹೆಸರಾಂತ ಲೇಖಕರ ಬಗ್ಗೆ ವಿಮರ್ಶೆಯೂ ಇದೆ. ವಾಗ್ಮಿಯ ಶಿಕ್ಷಣವೆಂದರೆ ನಾಗರಿಕ ಸಮಾಜದಲ್ಲಿ ಗಣ್ಯಸ್ಥಾನವನ್ನು ಪಡೆದು ವರ್ಚಸ್ಸಿನಿಂದ ಬಾಳುವ ಆಕಾಂಕ್ಷೆ ಯಾರಿಗುಂಟೊ ಆತನಿಗೆ ಅವಶ್ಯಕವಾದ ನಾನಾ ಮುಖದ ವಿದ್ಯಾಭ್ಯಾಸ, ಸಾರ್ಥಕ ವಾಗ್ಮಿತೆಗೆ ಭಾಷೆಯನ್ನು ದಕ್ಷತೆಯಿಂದ ಉಪಯೋಗಿಸುವ ಚಾತುರ್ಯವೊಂದೇ ಸಾಲದು. ಜೊತೆಗೆ ಚರಿತ್ರೆ, ತತ್ವಶಾಸ್ತ್ರ, ವಿಜ್ಞಾನ, ಸಾಹಿತ್ಯಗಳ ಪರಿಚಯವೂ ವಾಸ್ತವಿಕ ಜೀವನದ ಅನುಭವವೂ ಬೇಕು. ಅವೆಲ್ಲವನ್ನೂ ಗಳಿಸಿಕೊಂಡವನೇ ನಿಜವಾದ ವಾಗ್ಮಿ. ಸಿಸಿರೋನ ಕಾಲದಲ್ಲೇ ಈ ಬಗೆಯ ಅಭಿಪ್ರಾಯ ಕಂಡುಬಂತು. ಕ್ಷಿಪ್ರವಾಗಿ ಅದು ಹಬ್ಬಿ ಹರಡಿ, ರೋಮನರ ಮಾತೃಭೂಮಿಯಾದ ಇಟಲಿಯೊಂದರಲ್ಲೇ ಅಲ್ಲದೆ ಅವರು ಕಟ್ಟಿದ ಚಕ್ರಾಧಿಪತ್ಯದ ಭಾಗಗಳಾದ ಸ್ಪೇನ್, ಗಾಲ್, ಆಫ್ರಿಕಗಳಲ್ಲೂ ಪ್ರಚಾರಗೊಂಡು ಪ್ರಬಲ ಪ್ರಚೋದನೆಯನ್ನೊದಗಿಸಿತು. ಮೊದಮೊದಲು ಗ್ರೀಕ್ ಭಾಷೆಯ ಆಕರ್ಷಣೆ ಅತಿಯಾಗಿತ್ತು; ಆಮೇಲೆ ಲ್ಯಾಟಿನ್ ಅದನ್ನು ಹಿಂದಕ್ಕೆ ಹಾಕಿತು. ಸಿಸಿರೋನ ಮರಣದಿಂದ ಕ್ವಿಂಟಿಲಿಯನ್ ಪ್ರಬುದ್ಧನಾಗುವವರೆಗಿನ ಸುಮಾರು ನೂರು ವರ್ಷದ ಅಂತರದಲ್ಲಿ ಭಾಷಣ ಕಲೆ ಸರ್ವತೋಮುಖವಾಗಿ, ಸಮೃದ್ಧವಾಗಿ ಬೆಳೆಯಿತು. ಆದರೆ ಆ ಅಭಿವೃದ್ದಿ ಉತ್ತಮ ಕಲೆಯ ಲಕ್ಷಣಗಳಿಂದ ಕೂಡಿ ತೃಪ್ತಿಕರವಾಗಿರಲಿಲ್ಲ; ಅಧಮ ಕಲೆಯ ಕಳಂಕಗಳಿಂದ ನಿಬಿಡವಾಗಿ ತೃಪ್ತಿಭಂಗ ಮಾಡುತ್ತಿತ್ತು. ಶಬ್ದಾಡಂಬರ, ಕ್ಲಿಷ್ಟಾರ್ಥ, ಸಂದಿಗ್ಧತೆ ದೂರಸಾದೃಶ್ಯ, ವಿಕಟಾಲಂಕಾರಗಳ ಕಲಬೆರಕೆ, ವೈಪರೀತ್ಯಗಳ ಸುರಿಮಳೆ-ಮುಂತಾದ ಅಭಾಸಗಳು ಆ ಕ್ಷೇತ್ರದಲ್ಲಿ ಗಲಭೆ ಗೈಯುತ್ತಿದ್ದುವು. ಭಾಷಣ ಅಥವಾ ಲೇಖನದ ಗದ್ಯವನ್ನು ಪದ್ಯಮಯವಾಗಿಸಬೇಕೆಂಬುದೇ ಎಲ್ಲರ ಹೆಬ್ಬಯಕೆಯಾಗಿತ್ತು. ಪದ್ಯ ರೂಪಿತವಾಗಬೇಕಾದರೆ ಅದೊಂದೇ ಮಾರ್ಗವೆಂದು ಎಲ್ಲರ ನಂಬಿಕೆ. ಸಮಕಾಲೀನರ ಇಂಥ ಕೀಳು ಅಭಿರುಚಿಗೆ ಎದುರಾಗಿ ಕ್ವಿಂಟಿಲಿಯನ್ ಹೂಡಿದ ಸುದೀರ್ಘ ಆಕ್ಷೇಪಣೆಯೇ ಅವನ ಗ್ರಂಥದ ಉಗಮಕ್ಕೆ ಕಾರಣವಾಯಿತು.

	ಬಹಳ ಹಿಂದೆ ಕೇಟೊ ಹೇಳಿದ `ನಿಪುಣ ವಾಕ್ಕಿನ ಸತ್ಪುರುಷನೇ ವಾಗ್ಮಿ ಎಂಬ ಸೂತ್ರವನ್ನು ಒಪ್ಪಿಕೊಂಡು ತನ್ನ ಗ್ರಂಥವನ್ನು ಆರಂಭಿಸುತ್ತಾನೆ, ಕ್ವಿಂಟಿಲಿಯನ್, ಸದ್ಗøಹಸ್ಥನಾಗಬೇಕಾದರೆ ಸಮರ್ಪಕ ವಿದ್ಯಾಭ್ಯಾಸ ಅತ್ಯಗತ್ಯ; ಆ ವಿದ್ಯಾಭ್ಯಾಸ ಎಷ್ಟು ಮುಂಚೆ ಪ್ರಾರಂಭವಾದರೆ ಅಷ್ಟೂ ಒಳ್ಳೆಯದು, ಕ್ವಿಂಟಿಲಿಯನನ ಪುಸ್ತಕದ ಒಂದನೆಯ ಭಾಗವೆಲ್ಲ ವಿದ್ಯಾಭ್ಯಾಸಕ್ಕೆ ವಿನಿಯೋಗವಾಗಿದೆ. ಬಾಲ ಶಿಕ್ಷಣದ ಯಾವ ಅಂಗವನ್ನೂ ನಿಕೃಷ್ಟವೆಂದು ಅಲಕ್ಷಿಸಕೂಡದು. ವ್ಯಾಕರಣವೂ ಬೇಕು, ಸಂಗೀತವೂ ಬೇಕು. ಹೆಗ್ಗುರಿಯಾದ ಸಂಸ್ಕøತಿಯನ್ನು ಉದಾರಾರ್ಥದಲ್ಲಿ ತೆಗೆದುಕೊಳ್ಳತಕ್ಕದ್ದು, ಪ್ರಯೋಜನಕ್ಕೆ ಬಾರದ ಜ್ಞಾನವಿಲ್ಲ, ವಿದ್ಯೆಯಿಲ್ಲ. ಖಚಿತವಾದ ಅಭಿಪ್ರಾಯ, ಗ್ರಹಿಕೆ, ತಪ್ಪಿಲ್ಲದ ನುಡಿಗಟ್ಟು ಇವನ್ನು ಕಲಿತರೇ ಸಿದ್ಧಿ. ಪದಗಳ ವ್ಯಾಮೋಹದಲ್ಲಿ, ಅಲಂಕಾರಗಳ ಗೊಂದಲದಲ್ಲಿ, ಸಿಕ್ಕಿಕೊಂಡರೆ ಒಳಿತಲ್ಲ. ವ್ಯಾಕರಣದ ಒಂದು ಪ್ರಯೋಗವಾಗಲಿ ಅಲಂಕಾರದ ಒಂದು ಮರ್ಯಾದೆಯಾಗಲಿ ಅದನ್ನು ಬಿಡಿಸಿ ಒಡೆದು ಪ್ರತಿಯೊಂದು ಸಣ್ಣ ಅಂಶಕ್ಕೂ ಒಂದು ಪಾರಿಭಾಷಿಕ ನಾಮವನ್ನು ಹಚ್ಚುವುದು ಪ್ರಾಚೀನ ಗ್ರೀಕರಿಗೆ ಒಗ್ಗಿಬಂದ ಸಂಪ್ರದಾಯವಾಗಿತ್ತಷ್ಟೆ. ಅದನ್ನು ಕ್ವಿಂಟಿಲಿಯನ್ ಮೆಚ್ಚಲಾರ. ಇವನ ಅಭಿಮತದಂತೆ, ಅಷ್ಟೆಲ್ಲ ಪ್ರಯಾಸಕ್ಕೆ ಯಾವ ಆಧಾರವೂ ಇಲ್ಲ. ಸಜ್ಜನರು ಒಪ್ಪಿಕೊಂಡಿರುವ ಜೀವನ ಕ್ರಮವೇ ಯುಕ್ತ ವಾಡಿಕೆಯಾಗಿರುವಂತೆ ಸುಶಿಕ್ಷಿತರು ಒಪ್ಪಿಕೊಂಡಿರುವ ಮಾತಿನ ವಿಧಾನವೇ ಇಲ್ಲಿ ಯುಕ್ತ ವಾಡಿಕೆ.

	ಎಂದರೆ, ಪಾರಿಭಾಷಿಕವಾದ ಗೂಢವಿಚಾರಗಳು ಕ್ವಿಂಟಿಲಿಯನ್‍ಗೆ ಗೊತ್ತಿರಲಿಲ್ಲವೆಂದಲ್ಲ. ಈತನ ಗ್ರಂಥದ ಮುಂದಣ ಐದಾರು ಭಾಗ ಪೂರ್ತ ಭಾಷಣ ಶಾಲೆಗಳಿಗೂ ನ್ಯಾಯಾಸ್ಥಾನಗಳಿಗೂ ಸೇರಿದ ಸೂಕ್ಷ್ಮ ಸಂಕೀರ್ಣ ವಿಷಯಗಳ ಪ್ರಸ್ತಾಪವೇ ಹೆಚ್ಚಾಗಿ ಬರುತ್ತದೆ. ಅದೆಲ್ಲ ಬಹುಮಟ್ಟಿಗೆ ತಾತ್ಕಾಲಿಕವಾದದ್ದು, ಜಟಿಲವಾದದ್ದು. ನೀರಸವಾದದ್ದು. ಸಾಹಿತ್ಯಕ್ಕೂ ಸಾಹಿತ್ಯವಿಮರ್ಶೆಗೂ ಸಂಬಂಧಪಟ್ಟ ಚರ್ಚೆ ಅಲ್ಲಲ್ಲಿ ಸ್ವೀಕರಣೀಯವಾಗಿ ಬಂದು ಇಪ್ಪತ್ತನೆಯ ಶತಮಾನದವರೆಗೂ ಕ್ವಿಂಟಿಲಿಯನ್ ಉಪಯುಕ್ತನಾಗಬಲ್ಲನೆಂಬ ಭರವಸೆಯನ್ನು ನೀಡುತ್ತದೆ. ಎರಡನೆಯ ಭಾಗದಲ್ಲಿ ಬರುವ `ಭಾಷಣದ ವಿರಚನೆಯನ್ನು ಅಧ್ಯಯನ ಮಾಡುವ ರೀತಿ' ಎಂಬುದೂ ಆರನೆಯ ಭಾಗದಲ್ಲಿ ಬರುವ `ಬುದ್ಧಿಚಾತುರ್ಯ ಅಥವಾ ಹಾಸ್ಯ ಎಂಬುದೂ ವಿವೇಕನ್ಯಾಯ ನಾವೀನ್ಯಗಳಿಂದ ಕಾಂತಿಗೊಂಡು ಹೊಗಳಲರ್ಹವಾಗಿದೆ.

	ಎಂಟನೆಯ ಭಾಗದಲ್ಲಿ ಶೈಲಿಯ ಜಿಜ್ಞಾಸೆಯಿದೆ. ಇಲ್ಲಿನ ಅನೇಕ ಸೂಚನೆಗಳು ಗಮನಾರ್ಹವಾಗಿವೆ. ಭಾವಾರ್ಥವನ್ನು ನಿರ್ಲಕ್ಷಿಸಿ ಶಬ್ದಕ್ಕೆ ವಿಶೇಷ ಗಮನವನ್ನು ಕೊಡಕೂಡದು. ಹಾಗೆಯೇ ಶಬ್ದವನ್ನು ಪೂರ್ಣ ನಿರ್ಲಕ್ಷಿಸಲೂ ಬಾರದು. ಬಳಕೆಯ ಪದಕೋಶವೇ ಒಳ್ಳೆಯದು. ವಾಕ್ಯಸರಣಿ ತಿಳಿಯಾಗಿರಬೇಕು. ಇಂಪಾಗಿರಬೇಕು. ರಚನೆಯಲ್ಲಿ ಯಾವುದು ಉಪಯುಕ್ತವಾಗಿದೆಯೋ ಅದೇ ಚೆಲುವೂ ಆಗಿರುತ್ತದೆ. ಯಾವುದೂ ಅತಿಯಾಗಕೂಡದು. ಹಿಂದಣ ಮಹಾವ್ಯಕ್ತಿಗಳಾದ ಅರಿಸ್ಟಾಟಲ್, ಸಿಸಿರೊಗಳು, `ಆಲಿಸುವವರನ್ನು ಅಚ್ಚರಿಗೊಳಿಸಬೇಕು ಎಂದು ಹೇಳಿದ್ದಾರೆ; ಆಗಬಹುದು. ಆದರೆ ಆಡುವುದೆಲ್ಲ ತರಪೇತಾದ ಅಭಿರುಚಿಗೆ ಒಪ್ಪಿಗೆಯಾಗಿರಬೇಕು, ಗಂಡಸುತನದಿಂದ ಕೂಡಿರಬೇಕು. ಸದುಕ್ತಿಯನ್ನು (ನೋಮ್) ಕುರಿತು ಕ್ವಿಂಟಿಲಿಯನ್ನನ ವ್ಯಾಖ್ಯಾನ ಹೀಗಿದೆ; `ಈ ವಿಚಾರವಾಗಿ ಎರಡು ವಿರುದ್ಧ ಅಭಿಮತಗಳಿವೆ. ಕೆಲವರು ಸದುಕ್ತಿಗಳನ್ನು ಬಿಟ್ಟು ಬೇರೆ ಯಾವುದನ್ನೂ ಲಕ್ಷಿಸುವುದಿಲ್ಲ; ಕೆಲವರಿಗೆ ಅದು ಪೂರ್ತಿ ಹೊಲ್ಲ. ಎರಡರಲ್ಲಿ ಒಂದನ್ನೂ ನಾನು ಸಂಪೂರ್ಣವಾಗಿ ಒಪ್ಪಲಾರೆ. ಸೂಕ್ತಿಗಳು ತುಂಬ ಬಂದರೆ ಭಾವಕ್ಕೆ ತಡೆಯಾಗುತ್ತದೆ. ಪೈರಾಗಲಿ ಗಿಡಗಳಾಗಲಿ ಒತ್ತೊತ್ತಾಗಿ ಬೆಳೆದರೆ ಯಾವುದೂ ಸರಿಯಾದ ಎತ್ತರಕ್ಕೆ ಬೆಳೆಯುವುದಿಲ್ಲ. . .ಅಲ್ಲದೆ. . .ಶೈಲಿ ಪ್ರವಹಿಸದೆ ನಿಂತು ನಿಂತು ನಡೆಯುವಂತಾಗುತ್ತದೆ; ಒಂದೊಂದು ಸೂಕ್ತಿಯೂ ತಾನೇ ಪ್ರತ್ಯೇಕವಾಗಿ ನಿಲ್ಲುತ್ತದೆ.

	ಅಲಂಕಾರಗಳ ವಿವರಣೆಗೆ ಮೀಸಲಾಗಿರುವ ಒಂಬತ್ತನೆಯ ಭಾಗದಲ್ಲಿ ಒಂದೆರಡು ಕಡೆ ವಾಕ್ಯಗಳು ಹಿತವಾದ ಅಭಿಪ್ರಾಯವನ್ನು ಹೊರಗೆಡಹುತ್ತವೆ. ಗದ್ಯಕ್ಕೂ ಕ್ರಮವಿರಬೇಕು. ಆದರೆ ಪದ್ಯದಂತೆ ಅದು ಪೂರ್ತಿ ಛಂದೋಬದ್ಧವಾಗಿರಬಾರದು. ಅಲ್ಲಿ ಇಲ್ಲಿ ನಿಯತ ಛಂದಸ್ಸು ಬಂದರೂ ಚಿಂತೆಯಿಲ್ಲ. ಆದರೆ ಅದು ಬೇಗ ಬೇಗ ಪುನರುಕ್ತವಾಗಕೂಡದು. ಪ್ರಬಂಧದ ಪದಧೋರಣೆಯನ್ನು ಒರೆಹಚ್ಚಿ ಪರೀಕ್ಷಿಸುವ ಸಾಧನ ಕಿವಿ. ಆ ವಿಧಾನದಿಂದ ಒಂದು ಸರಣಿ ಸರಿ ಇನ್ನೊಂದು ಅಲ್ಲ ಎಂದು ತೀರ್ಮಾನಿಸಬಹುದು. ಆದರೆ ಏತಕ್ಕೆ ಹಾಗೆ ಎಂಬುದನ್ನು ಸಕಾರಣವಾಗಿ ತಿಳಿಸುವುದು ಅಸಾಧ್ಯ.

	ಹತ್ತನೆಯ ಭಾಗ ಅತ್ಯಂತ ಮುಖ್ಯವಾದುದು. ಅದರಲ್ಲಿ ಕ್ವಿಂಟಿಲಿಯನ್ ಗ್ರೀಕ್ ಮತ್ತು ಲ್ಯಾಟಿನ್ ಭಾಷೆಗಳಲ್ಲಿದ್ದ ಸಾಹಿತ್ಯ ಚರಿತ್ರೆ ತತ್ವಶಾಸ್ತ್ರಗಳ ವೀಕ್ಷಣೆ ನಡೆಸಿದ್ದಾನೆ. ಆಗಾಗ ಪರಸ್ಪರ ತೋಲನ ಮಾಡಿದ್ದಾನೆ. ಒಟ್ಟಿನಲ್ಲಿ ಕ್ವಿಂಟಿಲಿಯನ್ ಸ್ವದೇಶಪ್ರೇಮಿ. ಕೆಲವು ಗ್ರೀಕ್ ಲೇಖಕರನ್ನು ಮುಕ್ತಕಂಠದಿಂದ ಹೊಗಳಿದರೂ ಅಷ್ಟೊಂದು ಪ್ರಶಂಸೆಗೆ ಅರ್ಹರಲ್ಲದ ರೋಮನರನ್ನೂ ಎತ್ತಿ ಹಿಡಿಯುತ್ತಾನೆ. ಕ್ವಿಂಟಿಲಿಯನ್ನನ ದೃಷ್ಟಿಯಲ್ಲಿ ಪ್ಲೇಟೋಗೆ ಸಿಸಿರೊ ಸಮ. ಥೂಸಿಡಿಡೀಸನಿಗೆ ಸ್ಯಾಲಸ್ಟ್ ಸಮ. ಅದು ಹೋಗಲಿ, ವಿಮರ್ಶೆಗೆ ಬಹಳ ಸಹಾಯಕವಾದ ಅನ್ಯೋನ್ಯ ತೋಲನವನ್ನು ಅನುಕರಿಸಿದ್ದಕ್ಕಾಗಿ ಕ್ವಿಂಟಲಿಯನ್ನನಿಗೆ ಗೌರವ ಸಲ್ಲಿಸಬೇಕು. ಈ ಭಾಗದಲ್ಲಿ ಹಲವು ಉತ್ಕøಷ್ಟ ಸಲಹೆಗಳಿವೆ. ಬಹಳ ಚೆನ್ನಾಗಿ ಬರೆಯಬೇಕೆಂಬ ತವಕವಿರುವ ಕವಿಗಳಿಗೆ ಇಲ್ಲಿನ ಒಂದು ಕಥೆ ಅಚ್ಚುಕಟ್ಟಾಗಿ ಹೊಂದುತ್ತದೆ. ಕ್ವಿಂಟಲಿಯನ್ನನ ಸ್ನೇಹಿತನೊಬ್ಬನಿಗೆ ತಕ್ಕ ಶೈಲಿಯ ವಿಚಾರವಾಗಿ ಆತಂಕ ಉಂಟಾಯಿತಂತೆ. ತನ್ನ ಸೋದರಮಾವನಾದ ಫ್ಲೋರಸ್ ಎಂಬ ವಿದ್ವಾಂಸನ ಬಳಿಗೆ ಹೋಗಿ ದುಃಖವನ್ನು ತೋಡಿಕೊಂಡನಂತೆ. ಉತ್ತರವಾಗಿ ಫ್ಲೋರಸ್ ಯುವಕನನ್ನು ಹೀಗೆ ಕೇಳಿದನಂತೆ-`ನೀನು ಬರೆಯಬಲ್ಲುದಾದುದಕ್ಕಿಂತಲೂ ಹೆಚ್ಚು ಚೆನ್ನಾಗಿ ಬರೆಯಬೇಕೆಂಬ ಆಶೆಯೆ ನಿನಗೆ?'

	ಹನ್ನೊಂದನೆಯ ಭಾಗ ನ್ಯಾಯವೃತ್ತಿಗೆ ಸಂಬಂಧಿಸಿದೆಯಾಗಿ ಎಲ್ಲರಿಗೂ ಅದು ಹಿಡಿಸಲಾರದು. ಕೊನೆಯದಾದ ಹನ್ನೆರಡನೆಯ ಭಾಗದಲ್ಲಿ ಮತ್ತೆ ವಚನರೀತಿಯ ಪ್ರಸ್ತಾಪ ಬರುತ್ತದೆ. ಅಟ್ಟಿಕ್, ಏಷ್ಯಾಟಿಕ್, ರ್ಹೋಡಿಯನ್ ರೀತಿಗಳೆಂದು ಪ್ರಸಿದ್ಧವಾಗಿದ್ದ ಮೂರು ವರ್ಗಗಳನ್ನು ಇಲ್ಲಿ ಚರ್ಚಿಸಿ, ಅಟ್ಟಿಕ್ ಎಂಬುದನ್ನು ಅತ್ಯುತ್ಕøಷ್ಟವೆಂದು ಒಪ್ಪಲಾಗಿದೆ. ಅದರಲ್ಲಿ ಹಲವು ಬಗೆಗಳಿವೆ. ಹಲವು ಉಪವರ್ಗಗಳಿವೆ-ಎಂದು ಹೇಳಲಾಗಿದೆ. ಆಮೇಲೆ, ಗ್ರೀಕ್, ಲ್ಯಾಟಿನ್ ನುಡಿಗಳನ್ನು ಹೋಲಿಸಿ ಎರಡರ ಸಾರಸತ್ತ್ವ ಯಾವುದು, ಶಕ್ತಿಸಾಮಥ್ರ್ಯವೇನು-ಇತ್ಯಾದಿ ಅಂಶಗಳನ್ನು ಪರಿಶೀಲಿಸಲಾಗಿದೆ. `ಭಾಷೆ ಭಾಷೆಯಾಗಿ ನಮಗೆ ಬೆಂಬಲವೀಯುವುದು ಕಡಿಮೆಯಾದರೆ ವಿಷಯದಿಂದಲೂ ಕಲ್ಪನೆಯಿಂದಲೂ ಹೆಚ್ಚು ಬಲವನ್ನು ಪಡೆಯೋಣ.. . . .ಅವರಂತೆ ಬೆಡಗು ಬಿನ್ನಾಣವನ್ನು ನಾವು ತೋರಿಸಲಾರೆವು; ಅವರಿಗಿಂತ ಹೆಚ್ಚಾದ ಜೋರನ್ನೂ ಕಸುವನ್ನೂ ತೋರಿಸೋಣ. ನವಿರು ಸೂಕ್ಷ್ಮತೆಯಲ್ಲಿ ನಮ್ಮನ್ನು ಅವರು ಸೋಲಿಸಿದರೆ ತೂಕದಲ್ಲಿ ಅವರನ್ನು ಜಯಿಸೋಣ . . . ಆಳವಿಲ್ಲದೆಡೆಯಲ್ಲಿ ಅವರು ನುಸುಳಿ ತೇಲಿ ಸಾಗಲಿ, ನನ್ನ ಯಾನಕ್ಕೆ ಆಳವಾದ ಸಮುದ್ರ ದೊರಕಲಿ-ಇದು ಕ್ವಿಂಟಿಲಿಯನ್ನನ ಅಂತಿನ ತೀರ್ಮಾನ.
ಸಾಹಿತ್ಯ ವಿಮರ್ಶೆ ಕ್ವಿಂಟಿಲಿಯನ್ನನ ನೇರ ಗುರಿಯಲ್ಲ ನಿಜ; ವಾಗ್ಮಿತೆಗೆ ನೆರವಾಗುವ ಪದಕೋಶ, ಅಲಂಕಾರ ಸಮೂಹ, ಜ್ಞಾನಾನುಭವ ಸಾಮಗ್ರಿಗಳ ಪ್ರತಿಪಾದನೆ-ಇವು ಈತನ ಮುಖ್ಯೋದ್ದೇಶ. ಆದರೂ ಇವನಲ್ಲಿ ವಿನಯ ಸೌಹಾರ್ಯ ಔದಾರ್ಯ ಪಕ್ವಬುದ್ಧಿ ಗಾಢಜ್ಞಾನಗಳು ತುಂಬಿದ್ದುವು; ಸರಳವಾಗಿ ಸುಗಮವಾಗಿ ಮಧುರವಾಗಿ ಬರೆಯುವ ಶಕ್ತಿ ಇವನಲ್ಲಿತ್ತು; ನಿದರ್ಶನಗಳ ಆಯ್ಕೆಯಲ್ಲೂ ಅಂಗಗಳ ವ್ಯಾಪ್ತಿಯನ್ನು ನಿಷ್ಕರ್ಷಿಸುವುದರಲ್ಲೂ ಗುರುವಿಗೆ ಸಹಜವಾದ ಯುಕ್ತಾಯುಕ್ತ ವಿವೇಚನೆ ಇವನನ್ನು ನಡೆಸಿಕೊಳ್ಳುತ್ತಿತ್ತು. ಹೀಗಾಗಿ ಈತ ವಿಮರ್ಶಕನೂ ಆಗಿದ್ದಾನೆ.						(ಎಸ್.ವಿ.ಆರ್.)